ಪಶುವೈದ್ಯಕೀಯ ಮಹಾವಿದ್ಯಾಲಯ, ಹಾಸನ
ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರನ ನಾಲ್ಕನೇ ಪಶುವೈದ್ಯಕೀಯ ಮಹಾವಿದ್ಯಾಲಯವಾಗಿ 16ನೇ ಆಗಸ್ಟ್ 2007 ರಂದು ಕಾರ್ಯಾರಂಭ ಮಾಡಿತು. 2007-08ರ ರಾಜ್ಯ ಮುಂಗಡ ಪತ್ರದಲ್ಲಿ ಈ ಕುರಿತು ಘೋಷಣೆ ಮಾಡಲಾಗಿತ್ತು. ಕೊರವಂಗಲದಲ್ಲಿದ್ದ ರಾಜ್ಯ ಸರ್ಕಾರದ ರೇಷ್ಮೆ ಇಲಾಖೆಯ ಕ್ಷೇತ್ರದಲ್ಲಿ ಮೊದಲಿಗೆ ತರಗತಿಗಳನ್ನು ಆರಂಭಿಸಲಾಯಿತು. ಪ್ರಸ್ತುತ ಹಾಸನದ ವರ್ತುಲ ರಸ್ತೆಗೆ ಹೊಂದಿಕೊಂಡಂತೆ ಸುಮಾರು 80 ಎಕರೆಗಳಷ್ಟು ವಿಶಾಲವಾದ, ಅತ್ಯಂತ ಫಲವತ್ತಾದ ಮಣ್ಣಿನಿಂದ, ಕೆರೆಕಟ್ಟೆಗಳಿಂದ ಮತ್ತು ಮರಗಿಡಗಳಿಂದ ಕೂಡಿದ ಆವರಣದಲ್ಲಿ ಪಶುವೈದ್ಯ ಕಾಲೇಜು ಕಟ್ಟಡ ಇಡೀ ಹಾಸನ ಜಿಲ್ಲೆಯಲ್ಲೇ ಬೃಹತ್ ಮತ್ತು ಭವ್ಯಕಟ್ಟಡಗಳಲ್ಲಿ ಒಂದಾಗಿದೆ. ಇದರ ಬಲಬದಿಯಲ್ಲಿ ಕಲಾತ್ಮಕ ರಚನೆಯುಳ್ಳ ಬೋಧನಾ ಪಶುವೈದ್ಯಕೀಯ ಆಸ್ಪತ್ರೆಯಿದೆ. ಆವರಣದ ಸುತ್ತಲು ತಲೆಯೆತ್ತಿರುವ ಹಸಿರಿನಿಂದ ಕಂಗೊಳಿಸುವ ಮರಗಳ ಮಧ್ಯದಲ್ಲಿ ವಿದ್ಯಾರ್ಥಿಗಳ ಮತ್ತು ವಿದ್ಯಾರ್ಥಿನಿಯರ ವಸತಿ ನಿಲಯಗಳಿವೆ. ಕಾಲೇಜಿನ ಎದುರಿಗೆ ಕ್ರೀಡಾ ಸಮುಚ್ಚಯವಿದ್ದು ಇಲ್ಲಿ ವ್ಯಾಯಾಮ ಶಾಲೆ, ಆಟೋಟ ಸ್ಪರ್ಧೆ ನಡೆಸಲು ಒಳ ಮತ್ತು ಹೊರ ಕ್ರೀಡಾಂಗಣ ಇದೆ. ಜೊತೆಗೆ ವಿವಿಧ ಜಾನುವಾರು ಸಾಕಾಣಿಕಾ ಕೇಂದ್ರಗಳು, ಸಿಬ್ಬಂದಿಗಳ ವಸತಿಗೃಹಗಳು ಮತ್ತು ಅತಿಥಿಗೃಹವನ್ನು ಆವರಣವು ಒಳಗೊಂಡಿದೆ.
ವಿಶ್ವವಿದ್ಯಾಲಯದ ಮೂಲ ಉದ್ದೇಶದಂತೆ ಬೋಧನೆ, ಸಂಶೋಧನೆ ಮತ್ತು ವಿಸ್ತರಣಾ ಸೇವೆಗಳಲ್ಲಿ ತೊಡಗಿಸಿಕೊಂಡು ರಾಜ್ಯದ ಮಲೆನಾಡು ಭಾಗದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿಯತ್ತ ಯಶಸ್ಸಿನ ಹೆಜ್ಜೆಯನ್ನಿಟ್ಟಿದೆ. ರೈತಾಪಿ ವರ್ಗದ ಮತ್ತು ಪಶುಪಾಲಕರ ಉನ್ನತಿಗೆ ಮತ್ತು ಶ್ರೇಯೋಭಿವೃದ್ಧಿಗೆ ಶ್ರಮಿಸುವುದು ಮಹಾವಿದ್ಯಾಲಯದ ಧ್ಯೇಯೋದ್ದೇಶವಾಗಿದೆ.
ಮಹಾವಿದ್ಯಾಲಯವು ಭಾರತೀಯ ಪಶುವೈದ್ಯಕೀಯ ಪರಿಷತ್ತಿನ ರೂಪುರೇಷೆಗಳಂತೆ ಪಶುವೈದ್ಯಕೀಯ ಸ್ನಾತಕ ಪದವಿಯ ಶಿಕ್ಷಣವನ್ನು ನೀಡುತ್ತಿದೆ. ಇದಕ್ಕಾಗಿ 18 ವಿಭಾಗಗಳನ್ನು ಸುಸಜ್ಜಿತ ಪ್ರಯೋಗಾಲಯಗಳೊಂದಿಗೆ ಪರಿಷತ್ತಿನ ಮಾನದಂಡದಂತೆ ನಿರ್ಮಿಸಲಾಗಿದೆ. ಇದರ ಜೊತೆಗೆ ಸ್ನಾತಕೋತ್ತರ ಪದವಿಯಾದ ಎಂವಿಎಸ್ಸಿಯನ್ನು ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಮಾನದಂಡದಂತೆ ರೂಪಿಸಿ ಅಧ್ಯಯನ ನಡೆಸಲು ಏಳು ವಿಭಾಗಗಳಲ್ಲಿ ಅನುಕೂಲ ಮಾಡಿಕೊಡಲಾಗಿದೆ. ವಿದ್ಯಾರ್ಥಿಗಳು ಮತ್ತು ರೈತರನ್ನು ಕೇಂದ್ರೀಕರಿಸಿಕೊಂಡು ಅಂತರ್ಜಾಲ ಅಳವಡಿಸಿದ ತರಗತಿ ಕೊಠಡಿಗಳು, ಸಭಾಂಗಣಗಳು, ಪರೀಕ್ಷಾ ಕೇಂದ್ರಗಳು, ಗ್ರಂಥಾಲಯ ವ್ಯವಸ್ಥೆ, ಅಂತರ್ಜಾಲ ಸೌಕರ್ಯ, ಒಳರೋಗಿ ಕೇಂದ್ರಗಳು, ಸಾರಿಗೆ ವ್ಯವಸ್ಥೆ, ಪ್ರಾಣಿಗಳ ತುರ್ತು ಸಾಗಾಣಿಕೆ ವಾಹನ ಮತ್ತು ಸಾಕುಪ್ರಾಣಿಗಳು, ಜಾನುವಾರುಗಳು, ವನ್ಯಮೃಗಗಳಿಗೆ ಅತ್ಯುನ್ನತ ಚಿಕಿತ್ಸೆ ನೀಡುವ ಆಸ್ಪತ್ರೆಯನ್ನು ಹೊಂದಿದೆ.