ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ
ಶಿವಮೊಗ್ಗವು ಮಲೆನಾಡಿನ ಹೆಬ್ಬಾಗಿಲು ಎಂಬ ಪ್ರಸಿದ್ಧಿಹೊಂದಿರುವ ಪ್ರದೇಶ. ಈ ಪ್ರದೇಶವು ಶ್ರೀಮಂತ ಸಂಸ್ಕೃತಿ, ನೈಸರ್ಗಿಕ ಸಂಪನ್ಮೂಲ, ಕಲೆ-ಶಿಕ್ಷಣ-ಸಾಹಿತ್ಯ ಮತ್ತು ಸಾಮಾಜಿಕ ಸುಧಾರಣಾ ಕ್ಷೇತ್ರಕ್ಕೆ ಹೆಸರುವಾಸಿಯಾಗಿದೆ.
ಶಿವಮೊಗ್ಗದ ಪಶುವೈದ್ಯಕೀಯ ಮಹಾವಿದ್ಯಾಲಯವು 2006-07 ನೇ ಶೈಕ್ಷಣಿಕ ವರ್ಷದಲ್ಲಿ ರಾಜ್ಯ ಮುಂಗಡ ಪತ್ರದಲ್ಲಿ ಘೋಷಣೆಯಾದಂತೆ ಸ್ಥಾಪನೆಯಾಯಿತು. ಸಹ್ಯಾದ್ರಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಕಟ್ಟಡದಲ್ಲಿ ಸೆಪ್ಟೆಂಬರ್ 11, 2006 ರಂದು ಮೊದಲ ತಂಡದ 27 ವಿದ್ಯಾರ್ಥಿಗಳೊಂದಿಗೆ ಪಶುವೈದ್ಯಕೀಯ ಶಿಕ್ಷಣದ ತರಗತಿಗಳನ್ನು ಪ್ರಾರಂಭಿಸಲಾಯಿತು. ಬೆಂಗಳೂರು ಮತ್ತು ಬೀದರಿನ ಪಶುವೈದ್ಯಕೀಯ ಕಾಲೇಜಿನಿಂದ ನಿಯೋಜನೆಗೊಂಡ ನುರಿತ ಶಿಕ್ಷಕರಾದ ಡಾ. ವೈ. ಬಿ. ರಾಜೇಶ್ವರಿ, ಡಾ. ಸಿ. ಎಸ್. ನಾಗರಾಜ, ಡಾ. ಎಂ. ನಾರಾಯಣ ಸ್ವಾಮಿ, ಡಾ. ಕೆ. ಸತ್ಯನಾರಾಯಣ, ಡಾ. ಅಶೋಕ್ ಪವಾರ್ ಮತ್ತು ಡಾ. ಅಮಾನುಲ್ಲಾ ಅವರು ಸ್ಥಾಪಕ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಪ್ರಸ್ತುತವಾಗಿ, ಸೋಮಿನಕೊಪ್ಪ ಬಳಿಯ 172.18 ಎಕರೆ ವಿಸ್ತಾರದ ಪ್ರದೇಶದಲ್ಲಿ ಮಹಾವಿದ್ಯಾಲಯವು ಕಾರ್ಯನಿರ್ವಹಿಸುತ್ತಿದೆ.
ಪಶುವೈದ್ಯಕೀಯ ವಿಜ್ಞಾನ ಕ್ಷೇತ್ರದ ಬೋಧನೆ, ಸಂಶೋಧನೆ ಮತ್ತು ವಿಸ್ತರಣಾ ಕಾರ್ಯಗಳಲ್ಲಿ ಉತ್ತಮ ಸೇವೆ ಮತ್ತು ನಾಯಕತ್ತ್ವ ನೀಡುವುದು ಮಹಾವಿದ್ಯಾಲಯದ ಗುರಿಯಾಗಿದೆ. ವಿಶ್ವವಿದ್ಯಾಲಯದ ಧ್ಯೇಯವಾಕ್ಯದಂತೆ, ಗ್ರಾಮ ಆಧಾರಿತ ರೈತಸ್ನೇಹಿ ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ಇಲ್ಲಿ ಉತ್ತಮ ಗುಣಮಟ್ಟದ ಕೊಠಡಿಗಳು ಮತ್ತು ಸುಸಜ್ಜಿತ ಪ್ರಯೋಗಾಲಯಗಳಿವೆ. ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯ ಶಿಕ್ಷಣವನ್ನು ಕೆಲವು ವಿಭಾಗಗಳಲ್ಲಿ ನೀಡಲಾಗುತ್ತಿದೆ.
ಭಾರತೀಯ ಪಶುವೈದ್ಯಕೀಯ ಪರಿಷತ್ತಿನ ನಿಯಮಾನುಸಾರ ಮತ್ತು ವಿಶ್ವವಿದ್ಯಾಲಯದ ಮಾರ್ಗಸೂಚಿ ಪ್ರಕಾರ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಪಶುವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜಾನುವಾರು ಆರೋಗ್ಯ ಮತ್ತು ಉತ್ಪಾದನೆ ಹೆಚ್ಚಿಸಲು ಅರ್ಹ ಮತ್ತು ಸಮರ್ಥ ಪಶುವೈದ್ಯರನ್ನು ಸಮಾಜಕ್ಕೆ ನೀಡುವುದು ಈ ಮಹಾವಿದ್ಯಾಲಯದ ಮೂಲ ಉದ್ದೇಶ. ಬೋಧನೆ, ಸಂಶೋಧನೆ ಮತ್ತು ವಿಸ್ತರಣಾ ಕಾರ್ಯಗಳಲ್ಲಿ ಉತ್ತಮ ಸೇವೆ ನೀಡುವುದು ಈ ಮಹಾವಿದ್ಯಾಲಯದ ಗುರಿಯಾಗಿದೆ. ಜೊತೆಗೆ ಕಾರ್ಯಾಗಾರ, ತರಬೇತಿ ಕಾರ್ಯಕ್ರಮ, ಚಿಕಿತ್ಸೆ, ವನ್ಯಜೀವಿಗಳ ಮರಣೋತ್ತರ ಪರೀಕ್ಷೆ, ರೋಗ ನಿರ್ಣಯ ಸೇವೆ, ಪಶು ಆಹಾರ, ಹಾಲು, ಮಲ, ರಕ್ತ ಪರೀಕ್ಷೆ ಮತ್ತು ಇನ್ನಿತರ ರೈತಸ್ನೇಹಿ ವಿಸ್ತರಣಾ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ.