ಪಶುವೈದ್ಯಕೀಯ ಚಿಕಿತ್ಸಾ ಸಂಕಿರ್ಣ ವಿಭಾಗ
ಪಶುವೈದ್ಯಕೀಯ ಚಿಕಿತ್ಸಾ ಸಂಕೀರ್ಣ ವಿಭಾಗದಲ್ಲಿ ಚಿಕಿತ್ಸಾ ತರಬೇತಿ ನೀಡಲಾಗುತ್ತಿದೆ. ಬೀದರ್ ಮತ್ತು ಪಕ್ಕದ ಜಿಲ್ಲೆಗಳ ಜಾನುವಾರು ಸಾಕಾಣಿಕೆದಾರರಿಗೆ ಉಚಿತ ಚಿಕಿತ್ಸೆ ಮತ್ತು ಆರೋಗ್ಯ ತಪಾಸಣಾ ಸೌಲಭ್ಯವನ್ನು ಸದರಿ ವಿಭಾಗವು ಒದಗಿಸುತ್ತದೆ. ಪ್ರತಿ ವರ್ಷ ಸರಾಸರಿ 10,000 ಜಾನುವಾರುಗಳಿಗೆ ವರ್ಷದ ಎಲ್ಲಾ ದಿನಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಾನುವಾರು ಆರೋಗ್ಯ ಶಿಬಿರಗಳ ಮೂಲಕ ಗ್ರಾಮಮಟ್ಟದಲ್ಲಿ ಸಹ ಆರೋಗ್ಯ ಸೇವೆಗಳನ್ನು ವಿಭಾಗವು ಒದಗಿಸುತ್ತಿದೆ. ಪಾವತಿ ಆಧಾರದ ಮೇಲೆ ಪ್ರತಿ ಕಿಲೋಮೀಟರಿಗೆ 12 ರೂ.ನಂತೆ ಚಿಕಿತ್ಸೆಗಾಗಿ ಅನಾರೋಗ್ಯ ಜಾನುವಾರುಗಳನ್ನು ಸಾಗಿಸಲು ಧನ್ವಂತರಿ ಜಾನುವಾರು ಆಂಬ್ಯುಲೆನ್ಸ್ ಸೌಲಭ್ಯವಿರುತ್ತದೆ. ಮಹಾವಿದ್ಯಾಲಯದ 20 ಕಿ.ಮೀ. ವ್ಯಾಪ್ತಿಯಲ್ಲಿ ಬರುವ ಐದು ಆಯ್ದ ಗ್ರಾಮಗಳಿಗೆ ವಾರದಲ್ಲಿ ಐದು ದಿನ ಸಂಚಾರಿ ಚಿಕಿತ್ಸಾ ಸೇವೆಯನ್ನು ಒದಗಿಸಲಾಗುತ್ತಿದೆ. ಅತ್ಯಾಧುನಿಕ ರೋಗ ತಪಾಸಣಾ ಸೌಲಭ್ಯಗಳಾದ ಸ್ವಯಂಚಾಲಿತ ರಕ್ತವಿಶ್ಲೇಷಕ, ಅರೆ-ಸ್ವಯಂಚಾಲಿತ ಜೀವರಾಸಾಯನಿಕ ವಿಶ್ಲೇಷಕ, ಅಲ್ಟ್ರಾಸೊನೊಗ್ರಫಿ, ಎಲೆಕ್ಟ್ರೋಕಾರ್ಡಿಯೋಗ್ರಫಿ ಮತ್ತು ಎಂಡೋಸ್ಕೋಪಿ ಮುಂತಾದ ಉಪಕರಣಗಳು ಈ ವಿಭಾಗದಲ್ಲಿ ಲಭ್ಯವಿರುತ್ತವೆ. ಚಿಕಿತ್ಸೆಗಾಗಿ ದೂರದಿಂದ ಬರುವ ಜಾನುವಾರುಗಳಿಗಾಗಿ ಹತ್ತು ಕೋಣೆಗಳನ್ನೊಳಗೊಂಡ ಒಳರೋಗಿ ಚಿಕಿತ್ಸಾ ವಾರ್ಡ್ ಸೌಲಭ್ಯವನ್ನೂ ಹೊಂದಿದೆ. ಇಲ್ಲಿ 2 ರಿಂದ 3 ದಿನಗಳಿಗಿಂತ ಹೆಚ್ಚು ಕಾಲ ಚಿಕಿತ್ಸಾ ಪಾಲನೆಯ ಅಗತ್ಯವಿರುವ ಜಾನುವಾರುಗಳನ್ನು ದಾಖಲಿಸಲಾಗುವುದು. ನೆಲಕ್ಕೊರಗಿದ ದೊಡ್ಡ ಜಾನುವಾರುಗಳನ್ನು ಎತ್ತಿ ನಿಲ್ಲಿಸಲು ಯಾಂತ್ರಿಕೃತ ಸಲಕರಣೆಯು ಕೂಡಾ ಲಭ್ಯವಿರುತ್ತದೆ.